Skip to main content

ಲಿನಕ್ಸ್ (ಡೆಬಿಯಾನ್ ಗ್ನು) ಸಾಫ್ಟ್ ವೇರ‍್ ಈಗ ಕನ್ನಡದಲ್ಲಿ

Posted in

ಕರ್ನಾಟಕ ಸ್ವತಂತ್ರ ಸಾಫ್ಟ್ ವೇರ‍್ ಆಂದೋಲನ (ಎಫ್.ಎಸ್.ಎಮ್.ಕೆ.) ಲಿನಕ್ಸ್ (ಡೆಬಿಯಾನ್ ಗ್ನು) ಸಾಫ್ಟ್ ವೇರಿನ ಕನ್ನಡ ಅವತಾರವನ್ನು ಬಿಡುಗಡೆ ಮಾಡಲಿದೆ. ಇದು ಎಫ್.ಎಸ್.ಎಮ್.ಕೆ. ನ ಮತ್ತು ಇತರ ಉತ್ಸಾಹಿ ಸ್ವತಂತ್ರ ಸಾಫ್ಟ್ ವೇರ‍್ ಸ್ವಯಂಸೇವಕರ ಶ್ರಮದ ಫಲ. ಕಂಪ್ಯೂಟರಿನಲ್ಲಿ ಕನ್ನಡದ ಬಳಕೆಗೆ ಅಗ್ಗದ ಪರಿಣಾಮಕಾರಿ ಸ್ವತಂತ್ರ ಸಾಫ್ಟ್ ವೇರ‍್ ಬದಲಿ ಒದಗಿಸುವ ಮೂಲಕ, ಇ-ಆಡಳಿತ, ಶಿಕ್ಷಣ, ಕಚೇರಿ ಮತ್ತು ಮನೆಗಳಲ್ಲಿ ಕನ್ನಡದ ಬಳಕೆಗೆ ಮತ್ತು ಭಾಷೆಯ ಆಧುನಿಕೀಕರಣಕ್ಕೆ ಉತ್ತೇಜನ ನೀಡಲಿದೆ.

ಮಾರ್ಚ್ ೨೦/೨೧ ರಂದು ಬೆಂಗಳೂರಲ್ಲಿ ಮೊದಲ ಬಾರಿಗೆ ನಾವು ಸಂಘಟಿಸುತ್ತಿರುವ ಮೂರನೇಯ ರಾಷ್ಟ್ರೀಯ ಸ್ವತಂತ್ರ ಸಾಫ್ಟ್ ವೇರ‍್ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ನಡೆಯಲಿರುವ ಈ ಸಮಾರಂಭದ ಬಗ್ಗೆ ತಿಳಿಸುವುದು ನಮಗೆ ಸಂತೋಷ. ಮತ್ತು ಹೆಮ್ಮೆಯ ವಿಷಯ.

ಲಿನಕ್ಸ್ (ಡೆಬಿಯಾನ್ ಗ್ನು) ಸಾಫ್ಟ್ ವೇರಿನ ಕನ್ನಡ ಅವತಾರದ ಬಿಡುಗಡೆ ಮಾರ್ಚ್ ೧೪ ರಂದು ಒಂದು ಸ್ಲಂ ನಲ್ಲಿ ವಿಶಿಷ್ಟ ರೀತಿಯಲ್ಲಿ ಆಯೋಜಿಸಲಾಗಿದೆ. ಬಿಡುಗಡೆ ಎಫ್.ಎಸ್.ಎಮ್.ಕೆ ಒಂದು ಸ್ಲಂ ನಲ್ಲಿ ನಡೆಸುತ್ತಿರುವ ಅಂಬೇಡ್ಕರ‍್ ಸಮುದಾಯ
ಕಂಪ್ಯೂಟರ‍್ ಕೇಂದ್ರದಲ್ಲಿ (AC3) ನಡೆಯಲಿದೆ. AC3 ಹೊಸ ಗುರುಪನಪಾಳ್ಯದ ಸುದರ್ಶನ್ ಲೇ ಔಟಿನಲ್ಲಿ ಇದೆ. ಇದು ಬನ್ನೇರುಘಟ್ಟ ರಸ್ತೆಯಲ್ಲಿರುವ ಜಲಭವನದ ಕಚೇರಿಯ ಎದುರು ಇರುವ ಐ.ಬಿ.ಎಂ. ಆಫೀಸಿನ ಹಿಂದೆ ಇದೆ. ಕರ್ನಾಟಕ ಸ್ವತಂತ್ರ ಸಾಫ್ಟ್ ವೇರ‍್ ಆಂದೋಲನ ಸಮಾಜದ ದಟ್ಟ ದರಿದ್ರರ ಸಬಲೀಕರಣ ಮತ್ತು ಶಿಕ್ಷಣಗಳ ಮೂಲಕ ಐಟಿ ನಮ್ಮ ಸಮಾಜದಲ್ಲಿ ತರುತ್ತಿರುವ ಹೊಸ ಡಿಜಿಟಲ್ ಕಂದಕಗಳ ಮುಚ್ಚುವ ಮಂಚೂಣಿ ಕಾಯಕದಲ್ಲಿ ತೊಡಗಿದೆ. ಸ್ಲಂ ನಿವಾಸಿಗಳಿಗೆ ಉತ್ತಮ ಗುಣಮಟ್ಟದ ಕಂಪ್ಯೂಟರ‍್ ತರಬೇತಿ ನೀಡಲಾಗಿದ್ದು, ಇದು ಈ ಸ್ಲಂ ನಿವಾಸಿಗಳ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು ಅನುವಾಗಿದೆ. ಸ್ವತಂತ್ರ ಸಾಫ್ಟ್ ವೇರಿನ ಮೂಲಕ ಲಭ್ಯವಾದ ಜಂಪ್ (GIMP) ಎಂಬ ಪೈಂಟಿಂಗ್ ಸಾಫ್ಟ್ ವೇರಿನ ಲ್ಲಿ ನಿಪುಣತೆ ಪಡೆದ ೧೭ ವರ್ಷದ ಮಣಿ ಇದಕ್ಕೆ ಒಂದು ಉದಾಹರಣೆ. ವಿಕಲಾಂಗನಾಗಿರುವ ಮಣಿ ಇದರಿಂದ ಕಲಾವಿದನಾಗಿ ತನ್ನ ಕಾಲ ಮೇಲೆ ನಿಲ್ಲುವುದು ಸಾಧ್ಯವಾಗಿದೆ. ಮುಣಿಯ ಕಲಾಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಇದಲ್ಲದೆ ಸ್ಲಂ ಮಕ್ಕಳ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ. ಇದಲ್ಲದೆ ದೃಷ್ಟಿಮಾಂದ್ಯದಿಂದ ಬಳಲುತ್ತಿರವವರ ಕಂಪ್ಯೂಟರ‍್ ಬಳಕೆಯ ಸವಾಲುಗಳನ್ನು ಎದುರಿಸುವಲ್ಲಿ ಸ್ವತಂತ್ರ ಸಾಫ್ಟ್ ವೇರ‍್ ಏನು ಮಾಡಬಲ್ಲುದು ಎಂಬ ಬಗ್ಗೆ ವಿವೇಚನೆ ಇರುತ್ತದೆ.

ಕರ್ನಾಟಕ ಸ್ವತಂತ್ರ ಸಾಫ್ಟ್ ವೇರ‍್ ಆಂದೋಲನ (ಎಫ್.ಎಸ್.ಎಮ್.ಕೆ ) ಸ್ವತಂತ್ರ ಸಾಫ್ಟ್ ವೇರಿನ ಮೌಲ್ಯಗಳು, ಬಳಕೆ ಮತ್ತು ಸಾಧನಗಳ ಪ್ರಚಾರಕ್ಕೆ ಬದ್ಧವಾದ ಸ್ವಯಂಸೇವಾ ಸಂಘಟನೆ. ಎಫ್.ಎಸ್.ಎಮ್.ಕೆ. ಸ್ವತಂತ್ರ ಸಾಫ್ಟ್ ವೇರಿಗೆ ಬಧ್ಧರಾದ ಐಟಿ ಉದ್ಯೋಗಿಗಳು, ಸಂಶೋಧಕರು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಇತರ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವವರ ಒಂದು ಗುಂಪು. ಎಫ್.ಎಸ್.ಎಮ್.ಕೆ. ಸ್ವತಂತ್ರ ಸಾಫ್ಟ್ ವೇರಿನ ಸಂದೇಶವನ್ನು ಶಿಕ್ಷಣ, ಕೈಗಾರಿಕೆ, ಸಂಶೋಧನೆ ಕ್ಷೇತ್ರಗಳಲ್ಲಿ ಹಾಗೂ ಇಡೀ ಜನಸಮುದಾಯದಲ್ಲಿ ಹರಡುವ ಕಾಯಕದ ಮಂಚೂಣಿಯಲ್ಲಿದೆ.
ತಮ್ಮ ವಿಶ್ವಾಸಿ,
ಜೈಕುಮಾರ್
ಪ್ರಧಾನ ಸಂಚಾಲಕರು